ಸೋಪಾಧಿಕ ಪ್ರತಿವರ್ತಿ -
	ಅಸ್ವಾಭಾವಿಕ ಪ್ರತಿವರ್ತಿ (ರಿಫ್ಲೆಕ್ಸ್). ನಿರ್ದಿಷ್ಟ ಉದ್ದೀಪನೆಗೆ (ಸ್ಟಿಮ್ಯುಲಸ್) ಜೀವಿ ಅನೈಚ್ಛಿಕವಾಗಿ ತೋರುವ, ಅರ್ಥಾತ್ ಜೀವಿಯ ಸಂಕಲ್ಪಾಧೀನವಲ್ಲದ ಅನುಕ್ರಿಯೆ (ರೆಸ್ಪಾನ್ಸ್) ಇದು. ಪ್ರತಿವರ್ತಿಗಳನ್ನು ಎರಡು ಗುಂಪುಗಳಾಗಿ ವರ್ಗೀಕರಿಸಬಹುದು: ಸ್ವಾಭಾವಿಕ, ಅಸ್ವಾಭಾವಿಕ. ಮೊದಲನೆಯದು ಸಹಜಪ್ರವೃತ್ತಿ, ಎರಡನೆ ಯದು ಸ್ವಾರ್ಜಿತ. ಬೆನ್ನಹಿಂದೆ ಅನಿರೀಕ್ಷಿತವಾಗಿ ಕರ್ಕಶ ಶಬ್ದವಾದಾಗಲೆಲ್ಲ ಬೆಚ್ಚಿಬೀಳುವುದು ಸ್ವಾಭಾವಿಕ ಪ್ರತಿವರ್ತಿಗೂ ನಿರ್ದಿಷ್ಟ ಬಣ್ಣದ ಉಡುಪು ಧರಿಸಿದವನನ್ನು ನೋಡಿದಾಗಲೆಲ್ಲ ಬೆಚ್ಚಿಬೀಳುವುದು ಅಸ್ವಾಭಾವಿಕ ಪ್ರತಿವರ್ತಿಗೂ ಉದಾಹರಣೆಗಳು. ಈ ಸನ್ನಿವೇಶಗಳಲ್ಲಿ ಉದ್ದೀಪಕಗಳು ಬೇರೆ ಬೇರೆ ಆಗಿದ್ದರೂ ಅನುಕ್ರಿಯೆ ಒಂದೇ ಎಂಬುದು ಗಮನಾರ್ಹ. ಜೀವಿಯಲ್ಲಿ ಅಸ್ವಾಭಾವಿಕ ಪ್ರತಿವರ್ತಿಗಳು ನೆಲೆಗೊಳ್ಳಲು ಬಾಹ್ಯಪರಿಸರದ ಕೆಲವು ಉಪಾಧಿಗಳೇ (ಕಂಡಿಷನ್ಸ್) ಕಾರಣ. ಎಂದೇ, ಇವು ಸೋಪಾಧಿಕ (ಕಂಡಿಷನ್ಡ್) ಪ್ರತಿವರ್ತಿಗಳು. ಸ್ವಾಭಾವಿಕ ಪ್ರತಿವರ್ತಿಗಳೇ ನಿರುಪಾಧಿಕ ಅಥವಾ ಅಸೋಪಾಧಿಕ (ಅನ್‍ಕಂಡಿಷನ್ಡ್) ಪ್ರತಿವರ್ತಿಗಳು. ನಿರುಪಾಧಿಕ ಪ್ರತಿವರ್ತಿ ಕುರಿತಂತೆ ಉದ್ದೀಪಕ ಮತ್ತು ಅನುಕ್ರಿಯೆಯನ್ನು ನಿರುಪಾಧಿಕ-ಉದ್ದೀಪಕ ಮತ್ತು ನಿರುಪಾಧಿಕ-ಅನುಕ್ರಿಯೆ ಎಂದೂ ಸೋಪಾಧಿಕ ಪ್ರತಿವರ್ತಿ ಕುರಿತಂತೆ ಸೋಪಾಧಿಕ-ಉದ್ದೀಪಕ ಮತ್ತು ಸೋಪಾಧಿಕ-ಅನುಕ್ರಿಯೆ ಎಂದೂ ಉಲ್ಲೇಖಿಸಲಾಗುತ್ತದೆ.

	ಅಪೇಕ್ಷಿತ ಸೋಪಾಧಿಕ-ಉದ್ದೀಪಕ ಮತ್ತು ಯುಕ್ತ ನಿರುಪಾಧಿಕ-ಉದ್ದೀಪಕಗಳ ನಡುವೆ ಸಾಹಚರ್ಯ ಏರ್ಪಡಿಸುವುದರ ಮೂಲಕ ಜೀವಿಯಲ್ಲಿ ಸೋಪಾಧಿಕ ಪ್ರತಿವರ್ತಿ ನೆಲೆಗೊಳ್ಳುವಂತೆ ಮಾಡಲು ಸಾಧ್ಯ ಎಂಬುದನ್ನು ಪ್ರಯೋಗಾತ್ಮಕ ಅಧ್ಯಯನಗಳ ಮುಖೇನ ಮೊತ್ತ ಮೊದಲಿಗೆ ಸಾಬೀತುಪಡಿಸಿದ ಖ್ಯಾತಿ, ನೊಬೆಲ್ ಪ್ರಶಸ್ತಿ ಪುರಸ್ಕøತ (1904)  ದೇಹವಿಜ್ಞಾನಿ, ರಷ್ಯದ ಇವಾನ್ ಪೆಟ್ರೋವಿಚ್ ಪಾವಲೋ (1849-1936) ಎಂಬಾತನಿಗೆ ಸಲ್ಲುತ್ತದೆ. ಅಮೆರಿಕದ ಮನೋವಿಜ್ಞಾನಿ, ಜಾನ್ ಬ್ರಾಡಸ್ ವಾಟ್ಸನ್ (1878-1958) ಮಾಡಿದ ಪ್ರಯೋಗಗಳೂ ಈ ಆವಿಷ್ಕಾರವನ್ನು ದೃಢೀಕರಿಸಿದುವು.

	ನಿರ್ದಿಷ್ಟ ಉದ್ದೀಪಕಕ್ಕೆ ಯಾವ ಅನುಕ್ರಿಯೆ ಜೀವಿಗೆ ಹಿತಾನುಭವ ಒದಗಿಸುವುದೋ ಆ ಉದ್ದೀಪಕ-ಅನುಕ್ರಿಯೆ ಜೋಡಿ ಸೋಪಾಧಿಕ ಪ್ರತಿವರ್ತಿಯಾಗುತ್ತದೆ ಎಂದು ಪ್ರಾಯೋಗಿಕವಾಗಿ ಸಾಬೀತುಪಡಿಸಿ, ಪಾವಲೋನ ಆವಿಷ್ಕಾರಕ್ಕೆ ಹೊಸ ಆಯಾಮ ನೀಡಿದವ ಅಮೆರಿಕದ ಮನೋವಿಜ್ಞಾನಿ ಬರ್ಹಸ್ ಫೆಡ್ರಿಕ್ ಸ್ಕಿನ್ನರ್ (1904-90). ಈತ ರೂಪಿಸಿದ ಪರಿಭಾಷೆಯಲ್ಲಿ ಹಿತಾನುಭವ ಒದಗಿಸುವ ಕ್ರಿಯೆಯೇ ಪ್ರಬಲೀಕರಿಸುವಿಕೆ ಅಥವಾ ಪುಷ್ಟೀಕರಿಸುವಿಕೆ (ರೀಇನ್‍ಫೋರ್ಸಿಂಗ್). ಪ್ರಬಲೀಕರಿಸಲು ಏನನ್ನು ಬಳಸುತ್ತೇವೋ ಅವೇ ಪ್ರಬಲನಗಳು ಅಥವಾ ಪುಷ್ಟೀಕರಣಗಳು (ರೀಇನ್‍ಫೋರ್ಸ್‍ಮೆಂಟ್ಸ್). ಯುಕ್ತ ವೇಳೆಯಲ್ಲಿ ಯುಕ್ತ ಪ್ರಬಲನಗಳನ್ನು ನೀಡಿ ವರ್ತನೆಯನ್ನು ರೂಪಿಸಲು ಸಾಧ್ಯ ಎಂದು ಈತ ಸಾಧಿಸಿ ಶಿಕ್ಷಣಕ್ಷೇತ್ರದಲ್ಲಿ ಕ್ರಾಂತಿ ಉಂಟುಮಾಡಿದ.

	ಪಾವಲೋ ಮತ್ತು ಸ್ಕಿನ್ನರ್ ರೂಪಿಸಿದ ತಂತ್ರಗಳನ್ನು ಅನುಕ್ರಮವಾಗಿ ಅಭಿಜಾತ ಸೋಪಾಧೀಕರಣ (ಕ್ಲಾಸಿಕಲ್ ಕಂಡಿಷನಿಂಗ್) ಮತ್ತು ಕ್ರಿಯಾಜನ್ಯ ಸೋಪಾಧೀಕರಣ (ಆಪರೆಂಟ್ ಕಂಡಿಷನಿಂಗ್) ಎನ್ನುತ್ತೇವೆ. ಮೊದಲನೆಯ ಪ್ರಭೇದದಲ್ಲಿ, ಜೀವಿಗೆ ಸೋಪಾಧಿಕ ಅನುಕ್ರಿಯೆಯನ್ನು ಆಯ್ಕೆಮಾಡುವ ಸ್ವಾತಂತ್ರ್ಯ ಇಲ್ಲ, ಅದನ್ನು ಹೊರಸೆಳೆಯಲಾಗುತ್ತದೆ; ಎರಡನೆಯದರಲ್ಲಿ ಇದೆ, ಸ್ವಇಚ್ಛೆಯಿಂದ ಅದನ್ನು ಹೊರಸೂಸುತ್ತದೆ. ಜೀವಿ ಈಗಾಗಲೇ ಪ್ರಕಟಿಸಲು ಕಲಿತಿರುವ ಅನುಕ್ರಿಯೆಗಳನ್ನು ಅಪೇಕ್ಷಿತ ಉದ್ದೀಪಕಗಳಿಗೆ ಪ್ರಕಟಿಸುವಂತೆ ಈ ತಂತ್ರಗಳ ನೆರವಿನಿಂದ ಮಾಡಲು ಸಾಧ್ಯ ಎಂದು ಅನೇಕ ಅಧ್ಯಯನಗಳು ಸ್ಥಿರೀಕರಿಸಿವೆ. ಇಂಥ ಕಲಿಕೆಯೇ ಸೋಪಾಧಿಕ ಕಲಿಕೆ. ಅಭ್ಯಾಸ ಬಲದಿಂದ ಅನ್ನಬಹುದಾದ ವರ್ತನೆಗಳ, ಅಸಹಜ ಭಯಗಳ, ಕೆಲವು ಪೂರ್ವಗ್ರಹಗಳ ಹಾಗೂ ಪ್ರಾಥಮಿಕ ಕೌಶಲಗಳ ಕಲಿಕೆಯನ್ನು ಸೋಪಾಧಿಕ ಕಲಿಕೆಯ ಪರಿಭಾಷೆಯಲ್ಲಿ ವಿವರಿಸಬಹುದು.	
		(ವಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ